ಪಿಕಾಸೋ, ಪ್ಯಾಬ್ಲೊ ರೂಯೀತಿ
1881-1973. ಚಿತ್ರಕಲಾ ಪ್ರಪಂಚವನ್ನೇ ವಿಸ್ಮಯಗೊಳಿಸಿದ ಈ ಶತಮಾನದ ಒಬ್ಬ ಮಹಾಮೇಧಾವಿ. ಖ್ಯಾತ ಚಿತ್ರಕಾರ ಹಾಗೂ ಶಿಲ್ಪಿ. 

ಕಾವ್ಯಕ್ಕೊಬ್ಬ ಟಿ. ಎಸ್. ಇಲಿಯೆಟ್. ಕಾದಂಬರಿಗೊಬ್ಬಳು ವರ್ಜಿನಿಯ ವುಲ್ಫ್. ಚಿತ್ರಕಲೆಗೊಬ್ಬ ಪ್ಯಾಬ್ಲೊ ಪಿಕಾಸೋ. ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಗತಾನುಗತಿಕತೆಯ ವಿರುದ್ಧ ದಂಗೆ ಎಬ್ಬಿಸಿದವರು. ಇಂದಿನ ಜೀವನದ ಬಗ್ಗೆ ಕಲಾವಿದರಲ್ಲಿ ಆಧಿಕತರ ಪ್ರಜ್ಞೆಯನ್ನು ಪ್ರತಿಪಾದಿಸಿದವರು. ಪಿಕಾಸೋ ಅತ್ಯಂತ ವಿವಾದಾಸ್ಪದ ಕಲೆಯನ್ನು ಸೃಷ್ಟಿಸಿ ಕೋಲಾಹಲವೆಬ್ಬಿಸಿದನಲ್ಲದೆ ಅರ್ವಾಚೀನ ಚಿತ್ರಕಲೆಯ ಉಪಾಸನೆಯಲ್ಲಿ ಪಿತಾಮಹನೆನಿಸಿ ಖ್ಯಾತಿ ಪಡೆದ. 

ಪಿಕಾಸೋ ಕ್ರಿ. ಶ. 1881 ಅಕ್ಟೋಬರ್ 25 ರಂದು ಸ್ಪೇನಿನ ಮಲಗಾ ಎಂಬ ಊರಲ್ಲಿ ಹುಟ್ಟಿದ. ತಂದೆಯ ಹೆಸರು ಡಾನ್ ಜೋಸ್ ರೂಯೀತಿ ಬ್ಲಾಸ್ಕೋ. ತಾಯಿಯ ಹೆಸರು ಮಾರಿಯ ಲೋಪಿಜ್ಜ. ಆತ ಬಾರ್ಸೆಲೋನಾ ಕಲಾ ಶಾಲೆಯಲ್ಲಿ ಪ್ರಾಧ್ಯಾಪಕನಾಗಿದ್ದ. ತಂದೆ ತಾಯಿಗಳ ಒಬ್ಬನೇ ಮಗ ಪಿಕಾಸೋ. ಈತ ಶಾಲೆಯಲ್ಲಿ ಅಷ್ಟು ಜಾಣನೆಂದು ತಂದೆಗೆ ತೋರಲಿಲ್ಲ. ಆದ್ದರಿಂದ ಹತ್ತನೆಯ ವಯಸ್ಸಿನಿಂದಲೇ ಚಿತ್ರಕಲೆ ಕಲಿಸತೊಡಗಿದ. ಬಾರ್ಸೆಲೋನಾ ಕಲಾಶಾಲೆಯ ಹಿರಿಯ ವಿಭಾಗಕ್ಕೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಕೃತಿರಚನೆ ಮಾಡಿಕೊಡಬೇಕಾಗಿತ್ತು. ಪಿಕಾಸೋ ಆ ಬಗ್ಗೆ ಅಗತ್ಯವಾದ ಚಿತ್ರಗಳನ್ನು ಒಂದೇ ದಿನದಲ್ಲಿ ಮುಗಿಸಿಕೊಟ್ಟ. ಉಳಿದವರಿಗೆ ಅಂಥ ಕೃತಿ ರಚಿಸಲು ಒಂದೆರಡು ತಿಂಗಳಾದರೂ ಬೇಕಾಗುತ್ತಿತ್ತು. ಕಲಾಶಾಲೆಯಲ್ಲಿ ಮೃತ ಪಾರಿವಾಳದ ಕಾಲುಗಳನ್ನು ಕತ್ತರಿಸಿ ಹಲಗೆಯ ಮೇಲೆ ಹೊಡೆದಿಟ್ಟು ಅವುಗಳನ್ನು ನೋಡಿ ಚಿತ್ರಿಸಲು ಹೇಳುತ್ತಿದ್ದರು. ಹುಟ್ಟು ಕಲಾವಿದನಾಗಿದ್ದ ಈ ಬಾಲಕನಿಗೆ ಅಂಥ ಪಾಠ ಸೇರುತ್ತಿರಲಿಲ್ಲ, ಸಹಪಾಠಿಗಳು ದನ, ಜಿಂಕೆ, ಮೊಲ, ಕುದುರೆ, ಮುಂತಾದವನ್ನು ಬಿಡಿಸಲು ಹೇಳುತ್ತಿದ್ದರು. ಮಲಗಾ ಸ್ಪೇನಿನ ಕರಾವಳಿ ಪ್ರದೇಶ. ಅಲ್ಲಿ ಮಾರ್ಗದ ಬಳಿಯಲ್ಲಿ ವಿನೋದಾರ್ಥವಾಗಿ ಚಿತ್ರ ಬಿಡಿಸುತ್ತಿದ್ದರು. ಆ ಗೆಳೆಯರು ಹೇಳಿದಂತೆ ಬಾಲದಿಂದ, ಗೊರಸಿನಿಂದ ಎಲ್ಲಿಂದ ಬೇಕಾದರೂ ಚಿತ್ರ ಆರಂಭಿಸಿ, ಚೋಕನ್ನು ನೆಲದಿಂದ ಮೇಲಕ್ಕೆ ಎತ್ತದೆ ಒಂದೇ ಗೆರೆಯಿಂದ ಪ್ರಾಣಿಗಳ ದೊಡ್ಡ ದೊಡ್ಡ ಚಿತ್ರಗಳನ್ನು ಈತ ರಚಿಸುತ್ತಿದ್ದ. ಸುಪ್ರಸಿದ್ಧ ರ್ಯಾಫೆಯೆಲ್‍ನ ಹಾಗೆ ಚಿತ್ರಿಸಲು ಬಹುಬೇಗ ಕಲಿತ. ಹಾಗೆಯೇ ಸ್ವತಂತ್ರವಾಗಿ ವರ್ಣಚಿತ್ರ ಬಿಡಿಸುವುದರಲ್ಲಿ ಕೈ ಪಳಗಿತು. ಮೀಸೆ ಮೊಳೆಯುವ ಮೊದಲೇ ಒಂದು ಕೊಡೆ ಅಂಗಡಿಯಲ್ಲಿ ತನ್ನ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ. ಹದಿನಾಲ್ಕು ವರ್ಷ ತುಂಬಿದಾಗ ಚಿತ್ರಕಲೆಯಲ್ಲಿ ಮಗನ ಕುಶಲತೆಯನ್ನು ಕಂಡು ತಂದೆ ತನ್ನ ಚಿತ್ರದ ಉಪಕರಣಗಳನ್ನೆಲ್ಲಾ ಮಗನಿಗೆ ಒಪ್ಪಿಸಿಬಿಟ್ಟ. ತಾನು ಚಿತ್ರ ಬರೆಯುವುದನ್ನು ಬಿಟ್ಟುಬಿಟ್ಟ. ಪಿಕಾಸೋ 18 ನೆಯ ವಯಸ್ಸಿಗೆ ಫ್ರಾನ್ಸಿಗೆ ಹೋಗಿ ತನ್ನ ಜೀವಮಾನವನ್ನೆಲ್ಲ ಅಲ್ಲಿಯೇ ಕಳೆದ. 29 ತುಂಬುವವರೆಗೆ ಕಡುಬಡತನದಲ್ಲಿಯೇ ಜೀವಿಸಿದ. ಅಲ್ಲಿ ಒಬ್ಬ ಬಡ ಲೇಖಕನ ಚಿಕ್ಕ ಕೋಣೆಯಲ್ಲಿ ವಾಸವಾಗಿದ್ದ. ಅಲ್ಲಿ ಇದ್ದದ್ದು ಒಂದೇ ಮಂಚ. ಆದ್ದರಿಂದ ಲೇಖಕ ಬರೆಯುವಾಗ ಈತ ಮಂಚದ ಕೆಳಗೆ ಮಲಗುತ್ತಿದ್ದ. ಈತ ಚಿತ್ರಿಸುವಾಗ ಲೇಖಕ ಮಂಚದ ಕೆಳಗೆ ಮಲಗುತ್ತಿದ್ದ. ಒಂದು ರಾತ್ರಿ ಸಹಿಸಲಾಗದಷ್ಟು ಚಳಿ ಬಿದ್ದಿತ್ತು. ಬೆಚ್ಚಗಿರಲು ಏನು ಇಲ್ಲದೆ ಪಿಕಾಸೋ ತಾನು ವರ್ಷವೆಲ್ಲ ರಚಿಸಿದ ಚಿತ್ರಗಳನ್ನೇ ಒಂದೊಂದಾಗಿ ಬೆಂಕಿಗೆ ಹಾಕಿ ಮೈ ಕಾಯಿಸಿಕೊಂಡು ಜೀವ ಹಿಡಿಯಬೇಕಾಯಿತು. ಹೀಗೆ ಕಡುಬಡತನದಲ್ಲಿ ಜೀವನ ನಡೆಸಿದ. 

ಮೊದಲಿನಿಂದಲೂ ರೇಖಾ ಕೌಶಲ್ಯದಲ್ಲಿ ಪರಾಕಾಷ್ಠೆಯನ್ನು ಹೊಂದಿದ್ದ ಪಿಕಾಸೋ ಕೆಲಕಾಲ ಸಾಂಪ್ರದಾಯಿಕ ಶೈಲಿಯಲ್ಲಿ ಚಿತ್ರ ಬರೆದನಾದರೂ 19 ನೆಯ ವಯಸ್ಸಿಗಾಗಲೇ ಸಂಪ್ರದಾಯ ಕತೆಯ ಮೇಲೆ ಬೇಸರ ಬಂತು. ಕಲಾವಿದ ಬ್ರೆಕ್ಯೂನನ ಜೊತೆಯಲ್ಲಿದ್ದುದರಿಂದ 1907 ರಲ್ಲಿ ಪೇನ್ ಗುಂಪಿಗೆ ಸೇರಬೇಕಾಯಿತು. ಅಲ್ಲಿ ಅವರು ಹೊಳಪಿನ ವರ್ಣಗಳ ಬಳಕೆಯನ್ನು ಮತ್ತು ಸಾಂಪ್ರದಾಯಿಕ ತಂತ್ರವನ್ನೂ ತ್ಯಜಿಸಿದ್ದರು. ಆಗ ಫ್ರಾನ್ಸಿನಲ್ಲಿ ಜನಪ್ರಿಯವಾಗುತ್ತಿದ್ದ ಪರಿಣಾಮ ವಿಧಾನಕ್ಕೆ (ಇಂಪ್ರೆಶನಿಸಂ) ಒಲಿದು ವರ್ಷಾರು ತಿಂಗಳು ಅದನ್ನು ಅಭ್ಯಸಿಸಿದ. ಅದೂ ಸಾಕಾಗಿ ಅಲಂಕಾರಾತ್ಮಕ ಚಿತ್ರಗಳನ್ನು ಬರೆದಾಗಲೇ ಅವನ ಯೋಗ್ಯತೆಗೆ ಪ್ರಥಮ ಮಾನ್ಯತೆ ಲಭಿಸಿದ್ದು. ಆಮೇಲೆ ಒಮ್ಮಿಂದೊಮ್ಮೆ ತನ್ನ ಏಕವರ್ಣ ಚಿತ್ರಗಳಿಂದ ಕಲಾರಂಗದಲ್ಲಿ ಅಗ್ರಗಣ್ಯನಾದ. ಮೂರು ವರ್ಷ ನೀಲಿ ಹೊರತು ಬೇರಾವ ಬಣ್ಣವನ್ನು ಉಪಯೋಗಿಸಲಿಲ್ಲ. ಪ್ಯಾರಿಸಿನ ಬಡತನ ಪ್ರತೀಕವಾದ ಸೂಳೆಯರು, ಭಿಕ್ಷುಕರು ಮತ್ತು ಹೊಟ್ಟಗಿಲ್ಲದ ತಾಯಿ ಮಕ್ಕಳ ವಿಕೃತ ಭೀಕರ ಚಿತ್ರಗಳನ್ನು ರಚಿಸಿ ಪ್ರೇಕ್ಷಕರನ್ನು ದಿಗ್ಭ್ರಾಂತಿಗೊಳಿಸಿದ. ಅನಂತರ ನಸುಗೆಂಪು ವರ್ಣದ ಕಾಲ ಪ್ರಾರಂಭವಾಯಿತು. ಆಗ ಬರೆದ ಕುದುರೆಯೊಡನೆ ಬಾಲಕ, ಲೇಖಕ ಗಟ್ರ್ರೊಪ್, ಸ್ಪೇನಿನ ಭಾವಚಿತ್ರ-ಇವು ಇಂದಿಗೂ ಪ್ರಸಿದ್ಧವಾಗಿವೆ.

ಆಫ್ರಿಕನ್ ಶಿಲ್ಪಗಳಿಂದ ಪ್ರಭಾವಿತನಾದ ಪಿಕಾಸೋ ಘನಾಕೃತಿ (ಕ್ಯೂಬಿಸಂ) ಕಲೆಯ ಪ್ರವರ್ತಕನಾದ. ಮುಂದೆ ಘನಾಕೃತಿಯ ಕಲಾಶೈಲಿಗಿಂತ ಭಿನ್ನವಾದ ಒಂದು ಶೈಲಿಯನ್ನು ವಿಕಾಸಗೊಳಿಸಿದ. ಎಲೆಗಳ ಬಣ್ಣಕ್ಕೆ ಮಹತ್ವ ನೀಡಿದನೇ ಹೊರತು ಅವುಗಳ ಆಕಾರಕ್ಕಲ್ಲ. ಚಿತ್ರಗಳಲ್ಲಿ ಕೆಲ ಗುಣಗಳನ್ನು ಪ್ರಮುಖವಾಗಿ ತೋರುವಂತೆ ಮಾಡಿ, ಬೇರೆ ಕೆಲ ಗುಣಗಳನ್ನು ಹಿಂದಕ್ಕೆ ತಳ್ಳಿದ. ಇಲ್ಲಿ ಕಂಡುಬಂದಿದ್ದು ಸಂಗೀತ, ವಾಸ್ತುಶಿಲ್ಪಗಳ ಅನುಕರಣ. ಇದು ಅಮೂರ್ತಕಲೆ ಎನಿಸಿಕೊಂಡಿತು.

ಪಿಕಾಸೋ ಆದಿಮಾನವನ ಕಲಾಶೈಲಿಯಿಂದ ಈ ಮೊದಲೇ ಪ್ರಭಾವಿತನಾಗಿ ಕಂಡುಕೊಂಡ ಹೊಸ ತಂತ್ರ ಇದೆಂದು ತೋರುತ್ತದೆ. ಆಗ ಪ್ಯಾರಿಸ್ ಮತ್ತಿತರ ಕಲಾ ವಸ್ತು ಸಂಗ್ರಹಾಲಯದಲ್ಲಿರಿಸಿದ್ದ ಪ್ರಾಚೀನ ಐಬೀರಿಯನ್ ಶಿಲ್ಪ ಹಾಗೂ ಆಫ್ರಿಕನ್ ನೀಗ್ರೋ ಶಿಲ್ಪ ಕೃತಿಗಳೂ ಪಿಕಾಸೋನ ಮೇಲೆ ಹೆಚ್ಚಾಗಿ ಪ್ರಭಾವ ಬೀರಿದವು. ಒರಟುತನದ ಕಲೆಗಾರಿಕೆ ಎಂದು ತಿಳಿದ ಈ ಕಲೆಯಲ್ಲಿ ಅಡಗಿರುವ ಜೀವಂತ ಕಳೆ ಮತ್ತು ಪ್ರತಿಭೆ ವರ್ಚಸ್ಸುಗಳು ಪುರಾತನ ಯೂರೋಪಿಯನ್ ಕಲಾ ಶೈಲಿಗಳ ಕಟ್ಟುಕಟ್ಟಲೆಗಳಿಂದ ಬಿಡುಗಡೆ ಹೊಂದಲು, ನೇರವಾಗಿ ಸ್ವತಂತ್ರವಾದ ರಾಜಮಾರ್ಗವನ್ನು ಹಿಡಿಯಲು ಪ್ರೇರಣೆ ಕೊಟ್ಟವು. ಈ ಮಾರ್ಗದಲ್ಲಿ ಐವರು ನಗ್ನ ಮಹಿಳೆಯರ ಚಿತ್ರ ಪ್ರಥಮತಃ ಸೃಷ್ಟಿಯಾಯಿತು. ಈ ಭೀಕರ ಚಿತ್ರದಲ್ಲಿ ಮಹಿಳೆಯರ ಅಂಗಾಂಗಗಳು ನಿಸರ್ಗಕ್ಕೆ ದೂರವಾಗಿ ವಿಕಾರವಾದ ಭೌಮಿತಿಕ ಆಕೃತಿಗಳಿಂದ ನಿರ್ದೇಶಿಸಲ್ಪಟ್ಟಿವೆ. ಮಹಿಳೆಯರ ಪ್ರತಿಕೃತಿಗಳಲ್ಲಿ ಅವರನ್ನು ಕಂಡು ತನ್ನಲ್ಲಿ ಮೂಡಿದ ಭಾವಗಳ ಪ್ರತಿಬಿಂಬ ಅವು ಎಂದು ಪಿಕಾಸೋ ಹೇಳಿದ.

ಘನಾಕೃತಿ ವಿಧಾನವನ್ನು ತನ್ನ ಭಕ್ತರಿಗೆ ಬಿಟ್ಟು 1925 ರಲ್ಲಿ ಪಿಕಾಸೋ ಸರ್ರಿಯಲಿಸಂಗೆ ಮನ ತೆತ್ತ. ಈ ಶೈಲಿ ವಾಸ್ತವಲೋಕವನ್ನು ಬಿಟ್ಟು ಸ್ವಪ್ವಲೋಕದ ಅಸಂಬದ್ಧ ಹುಚ್ಚರ ಮನೆಯನ್ನು ಹೋಲುತ್ತದೆ. ಅದು ಹೊರಲೋಕವನ್ನಲ್ಲ-ಒಳಗಿನ ಲೋಕವನ್ನು ಪ್ರತೀಕಗಳ ಮೂಲಕ ಪ್ರಕಟಿಸುತ್ತದೆ. ಎಲ್ಲಕ್ಕೂ ಹೆಚ್ಚು ಕಾಲ ಪಿಕಾಸೋನನ್ನು ಹಿಡಿದಿರಿಸಿದ ಶೈಲಿ ಇದೇ ಆಗಿದೆ. 

ಸ್ಪೇನಿನ ಗೆರಸಿಕಾ ನಗರವನ್ನು ನಾಟ್ಜಿಗಳು ಬಾಂಬೆಸೆದು ಧ್ವಂಸಗೊಳಿಸಿದಾಗ ಆ ವಿನಾಶವನ್ನು ಗೆರನಿಕಾ ಎಂಬ ಹೆಸರಿನ ಚಿತ್ರದಲ್ಲಿ ಪಿಕಾಸೋ ನಿರೂಪಿಸಿದ. ತುಂಡಾದ ಅಂಗಾಂಗಗಳು ಅಧಿಕಾರಶಾಹಿ ಗೂಳಿ, ಮೃತಿ ಹೊಂದಿದ ಮಾನವ, ಅಳುತ್ತಿರುವ ಮಹಿಳೆ, ತಿವಿತಕ್ಕೊಳಗಾದ ಕುದುರೆ, ಉರಿಯುವ ಮನೆ, ಹೀಗೆ ಯುದ್ಧದ ಪರಿಣಾಮ, ಭಯಂಕರವಾದ ನಾಶ ಹಾಗೂ ದುಃಖಗಳೆಂದು ಹೃದಯಕ್ಕೆ ನಾಟುವಂತೆ ಚಿತ್ರಿಸಿದ. ಆ ಕಲಾಕೃತಿ ಜನಮನವನ್ನು ಯುದ್ಧದ ವಿರುದ್ಧ ಹೊಡೆದೆಬ್ಬಿಸುವಂತಿದೆ. ಕುಂಚ ಬಂದೂಕಿಗಿಂತಲೂ ಬಲಿಷ್ಠವಾದುದು ಎಂಬುದಕ್ಕೆ ಅದೊಂದು ನಿದರ್ಶನವಾಗಿದೆ. ಅಲ್ಲಿಗೆ ಬಂದು ಆ ಚಿತ್ರವನ್ನು ನಾಟ್ಜಿಗಳು ನೋಡಿ ಇದನ್ನು ಚಿತ್ರಿಸಿದವರಾರು ಎಂದು ಸಿಟ್ಟಿನಿಂದ ಕೇಳಿದಾಗ ಪಿಕಾಸೋ ನಿರ್ಭೀತಿಯಿಂದ ನೀವು ಎಂದು ಉತ್ತರಿಸಿದನಂತೆ. ಈ ಚಿತ್ರವನ್ನು ನಮ್ಮ ವಿಕೃತಗೊಂಡಿರುವ ಯುಗದ ಸಂಕಟಕ್ಕೀಡಾಗಿರುವ ದುರಂತ ಆತ್ಮ ಎಂದು ಕಲಾ ತಜ್ಞರು ಬಣ್ಣಿಸಿದ್ದಾರೆ. ಕಲಾವಿದ ಗೋಯಾದಂತೆ ಪಿಕಾಸೋ ಕಲೆಯಲ್ಲಿ ಯುದ್ಧದ ಭೀಕರ ದೃಶ್ಯಗಳ ಸ್ವರೂಪ, ದರ್ಶನ ಮಾಡಿಸಿಕೊಟ್ಟಿದ್ದಾನೆ.

ಕಮ್ಯುನಿಸ್ಟ್ ಪ್ರಭೃತಿಗಳು ಪಿಕಾಸೋನ ಚಿತ್ರಗಳನ್ನು ಖಂಡಿಸುತ್ತಾರೆ. ಆದರೆ, 1961 ರಲ್ಲಿ ಸೋವಿಯತ್ ದೇಶ ಇವನಿಗೆ ಲೆನಿನ್ ಬಹುಮಾನವಿತ್ತು ಗೌರವಿಸಿತು. ಇವನನ್ನು ಕಮ್ಯುನಿಸ್ಟ್ ಎಂದು ಬಂಡವಾಳಶಾಹಿಗಳು ಜರೆಯುತ್ತಾರಾದರೋ ಈತನ ಚಿತ್ರಗಳನ್ನು ಲಕ್ಷಾಂತರ ಡಾಲರ್ ತೆತ್ತು ಸಂಗ್ರಹಿಸುತ್ತಾರೆ. ಈತನ ಚಿತ್ರಗಳಲ್ಲಿ ಜನಾಂಗದ ವಿರುದ್ಧ ಜನಾಂಗ ಎಸಗುವ ದರ್ಪದ ಬಗ್ಗೆ ರೊಚ್ಚಿಗೇಳುವ ಸಹಜ ಸ್ವಭಾವ ವ್ಯಕ್ತವಾಗಿದೆ. ಈತ ಬರೆದ ಶಾಂತಿ ಸಂಕೇತವಾದ ಪಾರಿವಾಳವನ್ನು ಕಮ್ಯುನಿಸ್ಟರು ಅತಿಯಾಗಿ ಪ್ರಚಾರ ಮಾಡಿದರು. ಆದರೆ ಇವನ ಕುಂಚದ ಸ್ವಾತಂತ್ರ್ಯ ಅವರ ಕೈಗೆ ಸಿಗಲಿಲ್ಲ. 

1916 ರಿಂದ 1925 ರವರೆಗೆ ಇಟಲಿಯ ವಾಸ್ತವ್ಯದಲ್ಲಿ ಪಿಕಾಸೋ ಅಸಂಖ್ಯ ಸಾಂಪ್ರದಾಯಿಕ ನಗ್ನ ಚಿತ್ರಗಳನ್ನು ಬರೆದ. ಅವುಗಳಲ್ಲಿ ಚೆಲುವು ಒಸರುತ್ತಿದೆ ಎಂದು ಕಲಾ ತಜ್ಞರ ವಿಮóರ್ಶೆ.

ಈತನ ಪ್ಲೆಮಿ ಅಕ್ರೋಪಿ ಎಂಬ ವರ್ಣಚಿತ್ರ (1902) ಲಂಡನ್ನಿನ ಹರಾಜಿನಲ್ಲಿ 48 ಸಾವಿರ ಪೌಂಡು ಗಳಿಸಿತು. ಸಾಮಾನ್ಯವಾಗಿ ಪಿಕಾಸೋನ ಒಂದು ಚಿತ್ರಕ್ಕೆ ಇಂದಿನ ಬೆಲೆ ಒಂದರಿಂದ ಎಂಟು ಲಕ್ಷ ರೂಪಾಯಿ. ಇತ್ತೀಚೆಗೆ ಪಿಕಾಸೋ ರಚಿಸಿದ ರೂಪಾಯಿ ಮೇಡಂ ಸೋಲಾರ ಎಂಬ ತೈಲ ವರ್ಣದ ರೂಪಚಿತ್ರ ಹನ್ನೊಂದು ಲಕ್ಷಗಳಿಗೆ ನ್ಯೂಯಾರ್ಕಿನಲ್ಲಿ ಮಾರಾಟವಾಯಿತು. ಈತ ಹದಿನೈದು ಸಾವಿರಕ್ಕಿಂತಲೂ ಹೆಚ್ಚು ಚಿತ್ರ ರಚಿಸಿದ್ದನೆಂದೂ ಈ ಎಲ್ಲ ಚಿತ್ರಗಳ ಬೆಲೆ ನೂರು ಕೋಟಿ ರೂಪಾಯಿ ಆಗಬಹುದೆಂದು ಕಲಾ ತಜ್ಞರ ಅಂದಾಜು. ಪಿಕಾಸೋ ಫ್ರಾನ್ಸಿನ ಬ್ಯಾಂಕಿಗಿಂತಲೂ ಶ್ರೀಮಂತ.

ಪಿಕಾಸೋ ಕಲಾಲೋಕದಲ್ಲಿ ಸಾಂಪ್ರದಾಯಕತೆಯನ್ನು ಕೆರಳಿಸಿದ ಹಾಗೆಯೇ ನೀತಿ ಪ್ರಪಂಚವನ್ನೂ ಉದ್ರೇಕಿಸಿದ್ದಾನೆ. ಈತನ ಜೀವನದಲ್ಲಿ ಒಂದಲ್ಲ ಒಂದು-ಕೆಲ ವೇಳೆ ಒಂದಕ್ಕಿಂತ ಹೆಚ್ಚು ಹೆಣ್ಣುಗಳು ಬಂದು ಹೋಗುತ್ತವೆ. ಮೊದಲು ಫರ್ಡಿನಂಡ್ ಒಲಿವಿಯರ್ ಎಂಬ ಮಾಡೆಲ್ ಹೆಣ್ಣಿನ ಜೊತೆ ವಾಸಿಸಿದ. ಅವಳಿಗೆ ಮನೆಯೊಳಗೆ ಚಿಲಕ ಹಾಕಿ ಬಂಧನದಲ್ಲಿಡುವಷ್ಟು ಮಟ್ಟಿಗೆ ಇವನ ಮೋಹ, ಮತ್ಸರ, ಪ್ರೇಮ ಉತ್ಕಟವಾಗಿದ್ದುವು. ಅನಂತರ ವೋಲಾ ಕೊಕ್ಲೊವಾ ಎಂಬ ನರ್ತಕಿ ಈತನ ಕೈಹಿಡಿದಳು. ಅನಂತರ ಇವನ ಜೀವನದಲ್ಲಿ ಹಿಂಬಾಗಿಲಿನಿಂದ ದೋರಾಮಾರ್ ಎಂಬ ಲತಾಂಗಿ ಪ್ರವೇಶಿಸಿದಳು. ಈ ಮದುವೆಯೂ ಮುರಿದು ಪಿಕಾಸೋ ತನಗಿಂತ 40 ವರ್ಷ ಚಿಕ್ಕವಳಾದ ಪ್ರಾಂಚೋಸ್‍ಗಿಲೋ ಎಂಬಕೆಯನ್ನು ಮದುವೆಯಾದ. ಈ ಸುಂದರಿ ಕೊನೆಯವರೆಗೂ ಇವನ ಯಜಮಾನಿತಿ ಆಗಿದ್ದಳು.

ಪಿಕಾಸೋನ ವೈಶಿಷ್ಠ್ಯವೆಂದರೆ ಮೌಲಿಕ ಪ್ರತಿಭೆ ಮತ್ತು ಅಸಾಧಾರಣ ವೇಗ. 30 ಸೆಕೆಂಡುಗಳೊಳಗೆ ಈತ ಒಂದು ರೇಖಾಚಿತ್ರ ಬರೆದುಕೊಡಬಲ್ಲವನಾಗಿದ್ದ. ಈತನನ್ನು ನವ್ಯಕಲೆಯ ಸಾಮ್ರಾಟ ಎಂಬುದಾಗಿ ಲೋಕವೇ ಮನ್ನಿಸಿತು. 1964 ರಲ್ಲಿ ತನ್ನ 83 ನೇ ಪ್ರಾಯದಲ್ಲಿ "ತಪ್ಪೊಪ್ಪಿಗೆ" ಎಂಬ ಚಿತ್ರವನ್ನು ನೀಡಿ ಪಿಕಾಸೋ ಕಲಾಪ್ರಪಂಚವನ್ನು ದಿಗ್ಭ್ರಾಂತಗೊಳಿಸಿದ. ಕಲಾ ವಿಷಯಕ್ಕೆ ಮೀಸಲಾದ ಲಂಡನ್ನಿನ ದಿ ಲಿವಿಂಗ್ ಮ್ಯೂಸಿಯಂ ಎಂಬ ತ್ರೈಮಾಸಿಕದಲ್ಲಿ ಅದು ಪ್ರಕಟವಾಗಿದೆ. 
ವೇಶ್ಯೆ ಎಂಬ ಈತನ ಒಂದು ಚಿತ್ರ ಆಕೆಯ ಒಂದು ಪಾಶ್ರ್ವದ ಮುಖವನ್ನು ಮಾತ್ರ ತೋರುತ್ತದೆ. ತನ್ನ ಜೀವನದಿಂದ ದುಃಖತಪ್ತಳಾದವಳಂತೆ ಆಕೆಯ ಮುಖಭಾವವಿದೆ. ಚಿತ್ರ ಅಷ್ಟಕ್ಕೆ ನಿಲ್ಲುವುದಿಲ್ಲ. ಅವಳ ಮುಖದ ಅಗೋಚರವಾದ ಇನ್ನೊಂದು ಪಾಶ್ರ್ವವನ್ನು ಅದು ತೋರಿಸಲು ಪ್ರಯತ್ನಿಸುತ್ತದೆ. ಹೀಗೆ ಒಂದು ಜೀವನದ ವಿವಿಧ ಅನುಭವಗಳನ್ನು ಚಿತ್ರಭಾಷೆಯಲ್ಲಿ ಪಿಕಾಸೋ ವ್ಯಕ್ತಗೊಳಿಸಿದ್ದಾನೆ.

"ನಾನು ಚಿತ್ರದ ಅಧೀನ. ನನಗಿಂತ ಚಿತ್ರವೇ ಬಲಾಢ್ಯ. ಅದು ಆದೇಶಿಸಿದಂತೆ ನಾನು ವರ್ತಿಸುತ್ತೇನೆ. ಚಿತ್ರ ತನಗೆ ಬೇಕಾದಂತೆ ನನ್ನಿಂದ ಬರೆಸಿಕೊಳ್ಳುತ್ತದೆ" ಎಂದು ಪಿಕಾಸೋ ಹೇಳಿದ್ದಾನೆ. 

ಪಿಕಾಸೋ ಕುಂಚದಲ್ಲಿ ತೋರಿದ ಪ್ರತಿಭೆಯನ್ನೇ ಸಾಹಿತ್ಯದಲ್ಲೂ ತೋರಿಸಿದ್ದಾನೆ. ಸ್ಫೂರ್ತಿ ಬಂದಾಗ ಛಂದಸ್ಸಿನಲ್ಲಿ ಅನೇಕ ಕವಿತೆಗಳನ್ನು ರಚಿಸಿದ್ದಾನೆ. ಅಲ್ಲದೆ ಈತ ನಾಟಕಕಾರನೂ ಹೌದು. ಚಕೋಸ್ಲೊವಾಕಿಯಾದಲ್ಲಿ ಪಿಕಾಸೋನ ಪ್ರಶಂಸಕರೂ, ಆಪ್ತ ಮಿತ್ರರೂ, ನೆಚ್ಚಿನ ವಿಮರ್ಶಕರೂ ಇದ್ದಾರೆ.

ಪ್ಯಾರಿಸ್ ನಗರದಲ್ಲಿ ಸ್ವಂತ ದೊಡ್ಡ ಭವನಗಳನ್ನು ಕಟ್ಟಿಸಿದ್ದನಾದರೂ ಏಕಾಂತ ಪ್ರಿಯನಾದ ಪಿಕಾಸೋ ಫ್ರಾನ್ಸಿನ ಒಂದು ಹಳ್ಳಿಯಲ್ಲಿ ನೆಲೆಸಿದ. ಜಗತ್ತಿನಲ್ಲಿ ಪಿಕಾಸೋನ ಚಿತ್ರಗಳಿಲ್ಲದ ಸಂಗ್ರಹಾಲಯಗಳಿಲ್ಲವೆನ್ನಬಹುದು. ಕಲಾ ಪ್ರಪಂಚದಲ್ಲಿ ಈತನ ಖ್ಯಾತಿ ಅಂಥದು.											     (ಆರ್.ಜಿ.ಆರ್.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ